ಕೀರ್ತಿವರ್ಮ (ಚಂದೆಲ)

ಚಂದೆಲ ವಂಶದ ಅತ್ಯಂತ ಪ್ರಮುಖ ದೊರೆ (ಸು. 1073-1100) ; ವಿಜಯಪಾಲನ ಎರಡನೆಯ ಮಗ. ವಿಜಯಪಾಲನ ಮರಣಾನಂತರ ಹಿರಿಯನಾದ ದೇವೇಂದ್ರವರ್ಮ ಸ್ವಲ್ಪಕಾಲ ರಾಜ್ಯವಾಳಿ ಸು. 1073ರಲ್ಲಿ ಮರಣ ಹೊಂದಿದಾಗ ಕೀರ್ತಿವರ್ಮ ಚಂದೆಲ ರಾಜನಾದ. ಇವನು ಸಿಂಹಾಸನವನ್ನೇರಿದ ತರುವಾಯದಲ್ಲೇ ಕಳಚುರಿ ಕರ್ಣ ಇವನನ್ನು ಸೋಲಿಸಿ ರಾಜ್ಯವನ್ನು ಸ್ವಲ್ಪಕಾಲ ಆಕ್ರಮಿಸಿದ್ದ ಕೀರ್ತಿವರ್ಮ ತನ್ನ ನೆಚ್ಚಿನ ಸಾಮಂತನಾಗಿದ್ದ ಗೋಪಾಲನ ಸಹಾಯದಿಂದ ಕರ್ಣನನ್ನು ಸೋಲಿಸಿ ಪುನಃ ಅಧಿಕಾರ ಸ್ಥಾಪಿಸಿದ.

ಘಸ್ನಿ ಸಾಮ್ರಾಜ್ಯದ ಪಂಜಾಬ್ ಪ್ರದೇಶದ ಪ್ರಾಂತ್ಯಾಧಿಕಾರಿಯಾಗಿದ್ದ ಮಹಮ್ಮದ್ 1090ರಲ್ಲಿ ಕಲಂಜರ ಕೋಟೆಯನ್ನು ಮುತ್ತಿ ಕೊಳ್ಳೆ ಹೊಡೆದರೂ ಕೀರ್ತಿವರ್ಮ ಅವನನ್ನು ಸೋಲಿಸಿ ಹಿಮ್ಮೆಟ್ಟುವಂತೆ ಮಾಡಿದ. ಝಾನ್ಸಿ ಜಿಲ್ಲೆಯ ಕೀರ್ತಿಗಿರಿ ಎಂಬಲ್ಲಿ ಈತ ಒಂದು ಕೋಟೆಯನ್ನು ಕಟ್ಟಿಸಿದ. ದೇವಘಡದ ಬಳಿಯಲ್ಲಿ ಕೀರ್ತಿವರ್ಮನ ಒಂದು ಶಾಸನವೂ ಈತ ಅಚ್ಚು ಹಾಕಿಸಿದ ಅನೇಕ ಚಿನ್ನದ ನಾಣ್ಯಗಳೂ ದೊರೆತಿವೆ. ಕೀರ್ತಿವರ್ಮ ಪ್ರಬೋಧ ಚಂದ್ರೋದಯ ಗ್ರಂಥದ ಕರ್ತೃವಾದ ಕೃಷ್ಣಮಿಶ್ರನ ಆಶ್ರಯದಾತ. ಕೀರ್ತಿವರ್ಮನ ಮರಣಾನಂತರ ಅವನ ಮಗ ಸಲ್ಲಕ್ಷಣವರ್ಮ ರಾಜನಾದ.     

(ಜಿ.ಆರ್.ಆರ್.; ಡಿ.ಎಂ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ